ಸ್ಥಾಯಿ ಸಮಿತಿಗಳು

ಸ್ಥಾಯಿ ಸಮಿತಿಗಳ ರೂಪುರೇಷೆ

ಸ್ಥಾಯಿ ಸಮಿತಿಗಳ ಹೆಸರು ಮತ್ತು ಹೊಣೆಗಾರಿಕೆಗಳು:

 1. ನೀತಿ ನಿರುಪಣಾ ಸಮಿತಿ.

ವಿವರಣೆ: ಸರ್ಕಾರದೊಡನೆ, ಸಮ್ಯೋಜಿತ ಸಂಘ-ಸಂಸ್ಥೆಗಳೊಡನೆ ನಡೆಸಬಹುದಾದ ಪತ್ರ ವ್ಯವಹಾರಗಳು, ಕಾಯ್ದೆಗಳ ವಿಮರ್ಶೆ-ರೂಪುರೇಷೆ, ನ್ಯಾಯಾಲಯಗಳ ವ್ಯವಹರಣೆಗಳು ಈ ಸಮಿತಿಯ ಪ್ರಮುಖ ಅಂಶಗಳಾಗಿರುತ್ತವೆ.

 1. ಕೌಶಲ್ಯ ಸಂವರ್ಧನಾ, ತಂತ್ರಜ್ಞಾನ ಮತ್ತು ಸಂವಹನ ಸಮಿತಿ.

ವಿವರಣೆ ಅ: ಅಂಧ ನೌಕರರಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯಗಾರಗಳು ಮತ್ತು ದೃಷ್ಟಿ ಇರುವವರಲ್ಲಿ ಅಂಧ ಸಮುದಾಯದ ಏಳಿಗೆಗೆ ಪೂರಕವಾಗಿ ಸಂವೇದನಾಶೀಲವಾಗಿ ಸ್ಪಂದಿಸುವ ಸಕರಾತ್ಮಕ ಮನೋಭಾವವನ್ನು ಬೆಳೆಸುವುದಕ್ಕಾಗಿ ಕೈಗೊಳ್ಳುವ ಕಾರ್ಯಗಾರಗಳು ಈ ಸಮಿತಿಯ ಕಾರ್ಯವಾಗಿರುತ್ತದೆ.

ವಿವರಣೆ ಆ: ಸಂಘದ ಜಾಲತಾಣದ ವಿನ್ಯಾಸ-ನಿರ್ವಹಣೆ, ಸಾಮಾಜಿಕ ತಾಣಗಳ ನಿರ್ವಹಣೆ, ಸಂಘದ ಚಟುವಟಿಕೆಗಳನ್ನು ಸದಸ್ಯರಿಗೆ ಕಾಲಕಾಲಕ್ಕೆ ಅಗತ್ಯಾನುಸಾರ ತಿಳಿಸುವುದು ಇದರ ಕೆಲಸವಾಗಿರುತ್ತದೆ.

 1. ಮಹಿಳಾ ಆಧ್ಯತಾ ಸಮಿತಿ

ವಿವರಣೆ: ಒಟ್ಟಾರೆ ಅಂಧ ಮಹಿಳಾ ನೌಕರರ ಏಳಿಗೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳ ಯೋಜನೆಗಳು-ನಿಯಮಗಳು-ಕಾರ‍್ಯಗಾರಗಳು ಈ ಸಮಿತಿಯ ವ್ಯಾಪ್ತಿಯಲ್ಲಿರುತ್ತವೆ.

 1. ಸಂಪನ್ಮೂಲ ಆಧಾರಿತ ಯೋಜನಾ ಸಮಿತಿ.

ವಿವರಣೆ: ಬೌದ್ಧಿಕ ಮತ್ತು ಭೌತಿಕ ಸಂಪನ್ಮೂಲಗಳ ಸಂಗ್ರಹಣೆಗೆ ಪೂರಕವಾಗಿ ಕೈಗೊಳ್ಳುವ ಎಲ್ಲಾ ರೀತಿಯ ಅಂಶಗಳು ಈ ಸಮಿತಿಗೆ ಸೇರಿರುತ್ತವೆ ಮತ್ತು ಸಂಘದ ಸರ್ವ ಸದಸ್ಯರ ಬೌದ್ಧಿಕ ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸಲು ರೂಪಿಸಬಹುದಾದ ಯೋಜನೆಗಳು ಈ ಸಮಿತಿಯ ವ್ಯಾಪ್ತಿಯಲ್ಲಿರುತ್ತವೆ.

 1. ಪ್ರತಿಭಾನ್ವೇಷಣೆ ಮತ್ತು ಕಾರ್ಯಕ್ರಮ ರೂಪುರೇಷೆ ಸಮಿತಿ.

ವಿವರಣೆ: ಸದಸ್ಯರಲ್ಲಿರುವ ಹವ್ಯಾಸಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯ ರೂಪುರೇಷೆಯನ್ನು ಸಿದ್ಧಪಡಿಸುವುದು ಇದರ ಕರ್ತವ್ಯವಾಗಿರುತ್ತದೆ.

 1. ಮನವಿ ಸ್ವೀಕಾರ ಮತ್ತು ಕುಂದುಕೊರತೆ ನಿವಾರಣಾ ಸಮಿತಿ.

ವಿವರಣೆ: ಅಧ್ಯಕ್ಷರಿಗೆ ಅಥವಾ ಪ್ರಧಾನ ಕಾರ್ಯದರ್ಶಿಯವರಿಗೆ ಅಥವಾ ವಿಭಾಗೀಯ ಐದು ನಿರ್ದೇಶಕರಿಗೆ ಅಥವಾ ಮಹಿಳಾ ಉಪ ಅಧ್ಯಕ್ಷರಿಗೆ ಅಂಧ ನೌಕರರು ಸಲ್ಲಿಸಿದ ಲಿಖಿತ ಮನವಿ ಕ್ಲಿಷ್ಟವಾಗಿದ್ದರೆ ಅಂತಹ ಪತ್ರಗಳನ್ನು ಪರಿಶೀಲಿಸಲಿಕ್ಕಾಗಿ ಈ ಸಮಿತಿಗೆ ಜವಬ್ದಾರಿಯನ್ನು ನೀಡಲಾಗಿರುತ್ತದೆ. ಸಮಿತಿಯು ಈ ಕುರಿತಂತೆ ಕೈಗೊಳ್ಳಬಹುದಾದ ಪರಿಹಾರೋಪಾಯವನ್ನು ಅಧ್ಯಕ್ಷರಿಗೆ ಅಥವಾ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಬೇಕು.

ಸಮಿತಿಗಳ ಸ್ವರೂಪ

 1. ಸಮಿತಿಯ ಶೀರ್ಷಿಕೆಗೆ ತಕ್ಕಂತೆ ಬಹುಮುಖಿ ಆಯಾಮದಲ್ಲಿ ಸಮಿತಿಗೆ ನಿಯೋಜಿತವಾದ ಮುಖ್ಯಸ್ಥರು ಮತ್ತು ಸದಸ್ಯರು ಕಾರ್ಯನಿರ್ವಹಿಸಬೇಕು. ಈಗಾಗಲೇ ತಿಳಿಸಿರುವ ವ್ಯಾಪ್ತಿಯಲ್ಲಿರುವ ಕೆಲಸಗಳಿಗೆ ಸಮಿತಿಗೆ ಯಾವುದೇ ಮಿತಿ ಇರುವುದಿಲ್ಲ.
 2. ಸಮಿತಿಯ ಮುಖ್ಯಸ್ಥರು ಸಮಿತಿಯ ಸದಸ್ಯರೊಡನೆ ಸೇರಿ ಸಂಶೋಧನೆ, ಅಭಿಪ್ರಾಯ ಸಂಗ್ರಹಣೆ, ಅಧ್ಯಯನದ ಮೂಲಕ ದತ್ತವಾಗುವ ಅಂಶಗಳನ್ನು ಒಳಗೊಂಡ ವರದಿಯನ್ನು ಕನಿಷ್ಟ ಎರಡು ತಿಂಗಳ ಒಳಗೆ ಕಾರ್ಯಕಾರಿ ಸಮಿತಿಗೆ ಸಲ್ಲಿಸಬೇಕು. ಕಾರ್ಯಕಾರಿ ಸದಸ್ಯರು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಲ್ಲಿಕೆಯಾದ ವರದಿಯನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಇದ್ದರೆ, ತಿದ್ದುಪಡಿಗೊಳಿಸಬೇಕು ಮತ್ತು ತಡಮಾಡದೆ ವರದಿಯ ಅಂಶಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು.
 3. ಸರ್ಕಾರ ಅಥವಾ ಸಮ್ಯೋಜಿತ ಸಂಘ ಅಥವಾ ಮಾಧ್ಯಮಗಳ ಗಮನಕ್ಕೆ ತರಬಯಸುವ ಅಂಶಗಳಿದ್ದರೆ, ಸಮಿತಿಯ ಮುಖ್ಯಸ್ಥರು ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರ ಹೆಸರಿನಲ್ಲಿ ಪತ್ರದ ಕರಡನ್ನು ಸಿದ್ಧಪಡಿಸಬೇಕು. ಹಾಗೆಯೇ, ಯಾರ ಹೆಸರಿನಲ್ಲಿ ಪತ್ರವಿರುತ್ತದೆಯೋ ಅವರಿಗೆ ಸಮಿತಿಯ ಮುಖ್ಯಸ್ಥರು ಪತ್ರವನ್ನು ನೀಡಬೇಕು. ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ಪಡೆದ ಪತ್ರವನ್ನು ಪರಿಶೀಲಿಸಿ, ವಿವೇಚನಾನುಸಾರ ಸಹಿಯೊಡನೆ ಔಚಿತ್ಯವಾಗಿ ಪತ್ರ ವ್ಯವಹಾರ ನಡೆಸಬೇಕು. ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ತಮಗೆ ಕಾರ್ಯಗಳ ಒತ್ತಡವಿದ್ದಾಗ ಮಾತ್ರ ಸೂಚಿಸಿದ ಸಂಘದ ಸದಸ್ಯ ಅಗತ್ಯಾನುಸಾರ ಸಹಿಯಾದ ಪತ್ರದ ಅನುಸರಣೆ ಮಾಡಬೇಕು.

ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಮತ್ತು ಕೈಬಿಡುವುದು

ಈ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯು ಕಾರ್ಯಕಾರಿ ಸಮಿತಿಯ ಕಾಳಜಿಯಲ್ಲಿ ಇಲ್ಲಿ ತಿಳಿಸಿರುವಂತೆ ನಡೆಯಬೇಕು ಮತ್ತು ಸಮಿತಿಯನ್ನು ರಚಿಸಿದ ತರುವಾಯ ಸಮಿತಿಯಲ್ಲಿನ ಸದಸ್ಯನ ದುರ್ನಡತೆಯ ಆಧಾರದಲ್ಲಿ ಅಥವಾ ಕಾರ್ಯಕ್ಷಮತೆಯಲ್ಲಿ ನಿರೀಕ್ಷಿತ ಫಲಿತಾಂಶ ಕಂಡುಬಾರದಿದ್ದಲ್ಲಿ ಅಂತಹ ಸದಸ್ಯನನ್ನು ಕೈಬಿಟ್ಟು ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಅಧಿಕಾರವನ್ನು ಕಾರ‍್ಯಕಾರಿ ಸಮಿತಿ ಹೊಂದಿರುತ್ತದೆ.

 1. ಸ್ಥಾಯಿ ಸಮಿತಿಯು ರಚನೆಗೊಂಡಂದಿನಿಂದ ಸಂಘದ ಮತ್ತೊಂದು ಚುನಾವಣೆ ನಡೆಯುವ ದಿನಾಂಕದವರೆಗೆ ಆರು ಸದಸ್ಯರನ್ನು ಒಳಗೊಂಡಿರುತ್ತದೆ.
 2. ಕಾರ್ಯಕಾರಿ ಸಮಿತಿಯ ಒಬ್ಬ ಸದಸ್ಯ ಸ್ಥಾಯಿ ಸಮಿತಿಯ ಮುಂದಾಳುವಾಗಿರಬೇಕು. ಅದಾಗ್ಯೂ, ಸಮಿತಿಯ ಮುಂದಾಳತ್ವದ ಸ್ಥಾನಕ್ಕೆ ಕಾರ್ಯಕಾರಿ ಸದಸ್ಯ ತನ್ನ ಬದಲು ಸದರಿ ಸ್ಥಾಯಿ ಸಮಿತಿಯ ಇನ್ನುಳಿದ ಸದಸ್ಯರಲ್ಲೊಬ್ಬರನ್ನು ಮುಂದಾಳುವನ್ನಾಗಿಸಬಹುದು.
 3. ರಾಜ್ಯ ಪರಿಷತ್ತಿನ ಇಬ್ಬರು, ಅದರಲ್ಲಿ ಒಬ್ಬರು ಸಂಸ್ಥಾಪಕ ಸದಸ್ಯರು ಅಥವಾ ಸಂಸ್ಥಾಪಕ ಸದಸ್ಯರಿಂದ ಸೂಚಿಸಲ್ಪಟ್ಟ ಸಂಘದ ಹೊರಗಿನ ಅಥವಾ ಒಳಗಿನ ವ್ಯಕ್ತಿ, ಮತ್ತೊಬ್ಬರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇರುತ್ತಾರೆ.
 4. ಈ ಮೂವರಿಂದ ಸೂಚಿಸಲ್ಪಡುವ ಒಬ್ಬ ಸಾಮಾನ್ಯ ಸದಸ್ಯ.
 5. ಈ ನಾಲ್ವರಿಂದ ಒಮ್ಮತದ ಮೇರೆಗೆ ಆಯ್ಕೆಗೊಳ್ಳುವ ಮತ್ತೊಬ್ಬ ಸಾಮಾನ್ಯ ಸದಸ್ಯ ಅಥವಾ ಸಮಿತಿಯ ಕಾರ್ಯಗಳಿಗೆ ಪೂರಕ ಅರಿವನ್ನು ಹೊಂದಿರುವ ಸಂಘದ ಹೊರಗಿನ ವ್ಯಕ್ತಿ.
 6. ಈ ಐದು ಸದಸ್ಯರಿಂದ ಆಯ್ಕೆಗೊಳ್ಳುವ ಅಥವಾ ಕಾರ್ಯಕಾರಿ ಸಮಿತಿ ಸೂಚಿಸುವ ಸೇವಾ ಮನೋಭಾವದ ವ್ಯಕ್ತಿ. ಸೇವಾ ಮನೋಭಾವದ ವ್ಯಕ್ತಿಗೆ ಸಾಮಾನ್ಯ ಲಿಪಿಯ ಸಂವಹನ ಕೌಶಲ್ಯವಿರಬೇಕು ಮತ್ತು ಕಂಪ್ಯೂಟರ‍್ ಮೂಲಕ ಕನ್ನಡ ಇಂಗ್ಲಿಷ್ ಬರೆಯುವ ಕೌಶಲ್ಯವನ್ನು ಹೊಂದಿರಲೇಬೇಕಾಗಿರುತ್ತದೆ.
 7. ಈ ಸ್ಥಾಯಿ ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ಡಾಯವಾಗಿ ಇರತಕ್ಕದ್ದು.
 8. ಸಮಿತಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಿಸುವ ಮತ್ತು ಸದಸ್ಯರ ಸಂಖ್ಯೆಯನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಿಸುವ ನಿರ್ಧಾರವು ಕಾರ್ಯಕಾರಿ ಸಮಿತಿಯದ್ದಾಗಿರುತ್ತದೆ.