[:ka]ಆತ್ಮೀಯರೇ, ಅಂಧರು ಹಿಂದೆ ಸಂಗೀತ ಶಿಕ್ಷಕ ಅಥವ ಪದವಿಪೂರ್ವ ಶಿಕ್ಷಣಕ್ಕಿಂತ ಉನ್ನತ ಮಟ್ಟದಲ್ಲಿ ಕೆಲವೇ ವಿಷಯಗಳ ಬೋಧನೆಗೆ ಮಾತ್ರ ಸಮರ್ಥರೆಂದು ಭಾವಿಸಿ, ಕರ್ನಾಟಕ ಸರ್ಕಾರವು ಬೆರಳೆಣಿಕೆಯಷ್ಟು ವ್ಯಕ್ತಿಗಳಿಗೆ ಮಾತ್ರ ಉದ್ಯೋಗ ನೀಡುತ್ತಿತ್ತು. 2012 ರೀಚೆಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಹಾಗು ವಿವಿಧ ಅಂಧರ ಕ್ಷೇಮಾಬ್ಯುದಯ ಸಂಘಟನೆಗಳ ಒತ್ತಾಸೆಯಿಂದಾಗಿ ಇಂದು ಅಂಧರು ಬೇರೆಬೇರೆ ಇಲಾಖೆಗಳ [D] ದರ್ಜೆಯ ಹುದ್ದೆಯಿಂದ ಹಿಡಿದು [A] ದರ್ಜೆಯ ಹುದ್ದೆಯವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಬದಲಾದ ಸನ್ನಿವೇಶದಲ್ಲಿ ಸಾವಿರಾರು ಅಂಧರು ಕರ್ನಾಟಕ ನಾಗರಿಕ ಸೇವೆಯಲ್ಲಿ ಅವಿಭಾಜ್ಯ ಅಂಗವಾಗಿ ಇಂದು ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾಲೇಜು ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ಇಲಾಖೆಗಳ ವಿವಿಧ ದರ್ಜೆಗಳಲ್ಲಿ ಅಂಧರು ಇಂದು ಕಾರ್ಯನಿರತರಾಗಿದ್ದಾರೆ.
ದೃಷ್ಟಿಯುಳ್ಳ ನೌಕರರಿಗೆ ತಮ್ಮ ಸೇವಾ ಸಂಬಂಧಿ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಸಂಘಟನೆಗಳು ಕಾಲಾನುಕ್ರಮದಲ್ಲಿ ಬೆಳೆದು ಬಂದಿವೆ. ಅಂಧರು ದೃಷ್ಟಿಯುಳ್ಳವರಿಗಿಂತ ಭಿನ್ನ ಹಾಗು ಗಂಭೀರ ಸವಾಲುಗಳನ್ನು ತಮ್ಮ ಸೇವಾ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಅಂಧರ ಸವಾಲುಗಳ ಸೂಕ್ತ ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆ ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿದೆ. “ಜವಾಬ್ದಾರಿಯುತ ರಾಜ್ಯ ಸರ್ಕಾರಿ ನೌಕರರು”
ಹೆಸರಿನ Whatsapp ಗುಂಪನ್ನು ರಚಿಸಿಕೊಂಡ ಸಮಾನ ಮನಸ್ಕ ಅಂಧ ನೌಕರರು ಸಮಗ್ರ ಚರ್ಚೆಯ ಬಳಿಕ ಸಂಘಟನೆಯ ಸ್ಥಾಪನೆಗೆ ನಿರ್ಧರಿಸಿದಾಗ, ಮೇಲೆ ಉಲ್ಲೇಖಿಸಲಾದ ಸಂಘ ಜಾರಿಗೊಂಡಿತು.
ಮಾರ್ಚ್ 2017 ರಲ್ಲಿ ತಾತ್ಕಾಲಿಕ ಕಾರ್ಯಕಾರಿ ಮಂಡಳಿಯ ನಾಮಕರಣದೊಡನೆ ಬೆಳಕಿಗೆ ಬಂದಿರುವ ಸಂಘವು ಇಂದು ನೊಂದಾಯಿತ ಸಂಘಟನೆಯಾಗಿದೆ. ಏಪ್ರಿಲ್ 2018 ರಲ್ಲಿ ಸಂಘವು ಚುನಾಯಿತ ಕಾರ್ಯಕಾರಿ ಮಂಡಳಿಯನ್ನು ಹೊಂದಿದ್ದು ಅಂಧರ ಸರ್ವತೋಮುಖ ಹಿತಾಸಕ್ತಿಯ ರಕ್ಷಣೆಗಾಗಿ ಶ್ರಮಿಸಲು ಬದ್ಧವಾಗಿದೆ.
ಸಂಘವು ತಾನು ಸ್ಥಾಪನೆಗೊಂಡ ಅಲ್ಪ ಅವಧಿಯಲ್ಲೇ ವೇತನ ಆಯೋಗದ ಮುಂದೆ ಅಂಧರ ಸಮಸ್ಯೆಗಳನ್ನು ಮಂಡಿಸಲು, ಹೊಸ ಪಿಂಚಣಿ ನೌಕರರ ಹೋರಾಟಕ್ಕೆ ಕೈ ಜೋಡಿಸಲು, ಅಂಧರ ವೈವಿಧ್ಯಮಯ ಸಮಸ್ಯೆಗಳನ್ನು ಅರಿಯಲು ಶಕ್ತವಾಗಿದೆ. ಜೊತೆಗೆ ಇತರ ಸರ್ಕಾರಿ ನೌಕರರ ಸಂಘಟನೆಗಳ ಸಹಕಾರ ಹೊಂದಲು ಸಂಘವು ಮುಕ್ತವಾಗಿದೆ.
ಈ ಸಂದೇಶವನ್ನು ಓದಿದ ಪ್ರತಿಯೊಬ್ಬರು ಕರ್ನಾಟಕದ ಯಾವುದೇ ಮೂಲೆಯಲ್ಲಿರುವ ತಮ್ಮ ಪರಿಚಿತ ಅಂಧರಿಗೆ ಮಾಹಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಬಲವರ್ಧನೆಗೆ ಶ್ರಮಿಸಬೇಕೆಂದು ಈ ಮೂಲಕ ತಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ.
ರಮೇಶ್ ಹೇಮರೆಡ್ಡಿ ಸಂಕರೆಡ್ಡಿ,
ಅಧ್ಯಕ್ಷರು,
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ.[:]