- ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ 12 ಪದಾಧಿಕಾರಿಗಳ ಕಾರ್ಯಕಾರಿ ಸಮಿತಿಯು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ವಿಭಾಗಗಳ ಎಲ್ಲಾ ಜಿಲ್ಲೆಗಳ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಇದು ಆಡಳಿತ ಮತ್ತು ಲೆಕ್ಕ ಪತ್ರಗಳ ವಿಷಯದಲ್ಲಿ ರಾಜ್ಯದಲ್ಲಿಯ ಜಿಲ್ಲೆ ಹಾಗೂ ವಿಭಾಗಿಯ ಪದಾಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ.
- ಕರ್ನಾಟಕ ರಾಜ್ಯದಲ್ಲಿನ ರಾಜ್ಯ ಶಾಖೆಯೊಂದಿಗೆ ಅಗತ್ಯವೆನಿಸಿದಲ್ಲಿ ವಿಭಾಗೀಯ ಶಾಖೆಗಳನ್ನು ಕಾರ್ಯಕಾರಿ ಸಮಿತಿಯ ನಿರ್ಣಯದ ಮೇರೆಗೆ ರಚಿಸಬಹುದಾಗಿದೆ.
- ಕಾರ್ಯಕಾರಿ ಸಮಿತಿಯ ಅಧಿಕಾರ ಅವಧಿಯು ಚುನಾವಣೆಯ ನಂತರದ ಪ್ರಥಮ ಸಭೆಯಿಂದ ಜಾರಿಗೆ ಬರುವಂತೆ 3 ವರ್ಷಗಳಾಗಿರುತ್ತದೆ.
ವ್ಯಾಪ್ತಿ
ಸಮಗ್ರ ಕರ್ನಾಟಕ ರಾಜ್ಯ ಈ ಸಂಘದ ಅಧಿಕಾರ ವ್ಯಾಪ್ತಿಯಾಗಿರುತ್ತದೆ ಮತ್ತು ರಾಜ್ಯ ಪೋಲಿಸ್ ಮತ್ತು ಕಾರಾಗೃಹ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಹಾಗೂ ಕಾನೂನಿನ ಮೂಲಕ ವಿಶೇಷವಾಗಿ ನಿಷೇಧಿಸಲ್ಪಟ್ಟ ಮತ್ತು ಅಖಿಲ ಭಾರತ ಸೇವೆಯಿಂದ ಪಡೆದುಕೊಂಡ ಅಧಿಕಾರಿಗಳನ್ನು ಹೊರತುಪಡಿಸಿ ರಾಜ್ಯ ಸಂಚಿತ ನಿಧಿಯಿಂಧ ಸಂಬಳ ಇತ್ಯಾದಿ ಸಂದಾಯಗಳನ್ನು ಪಡೆಯುತ್ತಿರುವ ಕರ್ನಾಟಕ ಸರ್ಕಾರದಲ್ಲಿ ನಿಯೋಜಿತರಾದ ಎಲ್ಲಾ ಸರ್ಕಾರಿ ನೌಕರರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ವಿಧಾನ ಮಂಡಲದ ನೌಕರರು ಸೇರಿದಂತೆ ಹೆಚ್.ಆರ್.ಎಂ.ಎಸ್. ವ್ಯವಸ್ಥೆಗೆ ಒಳಪಡುವ ಮತ್ತು ಬೆಂಚ್‍ಮಾರ್ಕ್ ಡಿಸಬಿಲಿಟಿ ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರು ಈ ಸಂಘದ ಸದಸ್ಯರಾಗಲು ಅರ್ಹರಾಗಿರುತ್ತಾರೆ.
ಸಂಘದ ಧ್ಯೇಯೋದ್ದೇಶಗಳು
ಸಂಘದ ಧ್ಯೇಯೋದ್ದೇಶಗಳು ಈ ಕೆಳಗಿನಂತಿವೆ.
- ಅಂಧ/ ದೃಷ್ಟಿಮಾಂದ್ಯ, ನೌಕರರ ಹಿತಾಸಕ್ತಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವುದು
- ಅಂಧ ನೌಕರರ ಸ್ವಾವಲಂಬನೆಯ ಸಾಧನೆಗಾಗಿ ಅಗತ್ಯವಿರುವ ರೂಪುರೇಷೆಗಳನ್ನು ರೂಪಿಸುವುದು ಹಾಗೂ ಅವುಗಳ ಅನುಷ್ಠಾನಕ್ಕಾಗಿ ಸಂಬಂಧಿಸಿದ ಪ್ರಾಧಿಕಾರ/ ಇಲಾಖೆ/ ಸರ್ಕಾರದ ಗಮನ ಸೆಳೆಯುವುದು.
- ಅಂಧ/ ದೃಷ್ಟಿಮಾಂದ್ಯ ನೌಕರರ ಕರ್ತವ್ಯ ನಿರ್ವಾಹಣೆಗಾಗಿ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಯತ್ನಿಸುವುದು.
- ಅಂಧ ನೌಕರರ ಕರ್ತವ್ಯ ನಿರ್ವಹಣೆ ಸಂಬಂಧಿಸಿದಂತೆ ಆಡಳಿತಾತ್ಮಕ/ ತಾಂತ್ರಿಕ/ ಭೌತಿಕ ಹಾಗೂ ಇನ್ಯಾವುದೇ ಬಗೆಯ ಅಡೆತಡೆಗಳನ್ನು ನಿವಾರಿಕೊಳ್ಳಲು ಯತ್ನಿಸುವುದು.
- ಅಂಧ/ ದೃಷ್ಟಿಮಾಂದ್ಯ ನೌಕರರು ಕರ್ತವ್ಯ ನಿರ್ವಹಣೆಯ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ಘನತೆ ಗೌರವ ಹಾಗೂ ಸಮಾನತೆಗಳನ್ನು ಸಂರಕ್ಷಿಸುವುದು.
- 2016ರ ಆಂಗವಿಕಲರ ಹಕ್ಕುಗಳು ಅಧಿನಿಯಮ/ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ/ ಉಚ್ಚ ನ್ಯಾಯಾಲಗಳು/ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸಬಹುದಾದ ಸಮುದಾಯದ ಹಿತಾಸಕ್ತಿಗೆ ಪೂರಕವಾದ ಆದೇಶಗಳನ್ನು ಅನುಷ್ಟಾನಕ್ಕೆ ಬರುವಂತೆ ಪ್ರಯತ್ನಿಸುವುದು.
- ಅಂಧ ನೌಕರರ ಕರ್ತವ್ಯ ನಿರ್ವಾಹಣೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಮಾರ್ಗದರ್ಶಗಳನ್ನು ಪಡೆಯಲು ಅನುವಾಗುವಂತೆ ಪೂರಕ ವ್ಯವಸ್ಥೆಯನ್ನು ರಚಿಸುವುದು.
- ವಿಶೇಷವಾಗಿ ಅಂಧಮಹಿಳಾ ನೌಕರರಿಗೆ ಸಂಬಂಧಿಸಿದಂತೆ ಅಂಗವಿಕಲರ ಹಕ್ಕು ಅಧಿನಿಯಮ 2016ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿದ ಅಧಿನಿಯಮ ಹಾಗೂ ಆದೇಶಗಳಿಗನುಸಾರ ಇವರ ಹಿತಾಸಕ್ತಿ ರಕ್ಷಣೆಗೆ ಯತ್ನಿಸುವುದು.
- ಅಂಧ ನೌಕರರ ಅಂಧತ್ವದ ಬಗ್ಗೆ ಸಹದ್ಯೋಗಿಗಳು/ ಸಂಬಂಧಿಸಿದ ಇಲಾಖೆಗಳ/ ಸರ್ಕಾರದ ಹಂತದಲ್ಲಿ ಅರಿವು ಮೂಡಿಸಿ ಆ ಮೂಲಕ ಅಂಧನೌಕರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಬೆಳಸಿಕೊಳ್ಳಲು ಜಾಗೃತಿ ಮೂಡಿಸುವುದು.
- ಅಂಧ ನೌಕರರ ಕಾರ್ಯ ನಿರ್ವಹಣೆಗೆ ಸಂಬಂದಿಸಿದಂತೆ ಇಲಾಖೆ/ ಸರ್ಕಾರ ನೀಡಬಹುದಾದ ವಿವಿದ ಸ್ವರೂಪದ ತರಬೇತಿಗಳು ವಿಶೇಷವಾಗಿ ತರಬೇತಿಯ ಸಾಮಗ್ರಿಗಳು ಹಾಗೂ ವಿಧಾನಗಳನ್ನು ಅಂಧ ಸ್ನೆಹಿಯಾಗಿರುವಂತೆ ನೋಡಿಕೊಳ್ಳುವುದು. ಹಾಗೂ ಇದರ ಜೊತೆ ಕೆಲವೊಮ್ಮೆ ಅಂಧ ನೌಕರರಿಗಾಗಿ ಕೆಲವೊಂದು ವಿಶೇಷ ತರಬೇತಿಗಳನ್ನು ರೂಪಿಸಲು ಪ್ರಯತ್ನಿಸುವುದು.
- ಸಂಘದ ಸದಸ್ಯರ ಕಾರ್ಯನಿರ್ವಹಣೆಯ ದೃಷ್ಠಿಯಿಂದ ಅವಶ್ಯವಿರುವ ಹಾಗೂ ಸದಸ್ಯರ ಉತ್ಪಾದಕ ಸಾಮರ್ಥ್ಯವನ್ನು ವೃದ್ದಿಗೊಳಿಸಲು ಅಗತ್ಯವಿರುವ ಕಾರ್ಯಗಳನ್ನು ಉಪನ್ಯಾಸಗಳನ್ನು ಆಫ್ ಲೈನ್ ಹಾಗೂ ಆನ್‍ಲೈನ್ಗಳ ಮುಖಾಂತರ ಸಂಘವು ಆಯೋಜಿಸುವುದು. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಮಾದ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು. ಅಲ್ಲದೆ ಈ ಕಾರ್ಯಗಳಲ್ಲಿ ಸರ್ಕಾರದ/ ಇಲಾಖೆಗಳ ಹಾಗೂ ಇತರ ಪರಿಣಿತ ಸಂಘ ಸಂಸ್ಥೆಗಳ ಸಹಯೋಗ ಪಡೆಯಲು ಯತ್ನಿಸುವುದು.
- ಕೆಲಸಕ್ಕೆ ಸೇರಿದ ಅಂಧ ನೌಕರರಿಗೆ ಅವರ ಸಾಮರ್ಥ್ಯಕ್ಕನುಗುಣವಾಗಿ ನಿರ್ವಹಿಸಬಹುದಾದ ಕಾರ್ಯಗಳನ್ನು ಗುರುತಿಸುವಲ್ಲಿ ಅಥವಾ ಅಂತಹ ಕಾರ್ಯನಿರ್ವಾಹಣೆಗೆ ಅಗತ್ಯವಿರುವ ಪೂರಕ ಪರಿಕರ ತಂತ್ರಾಂಶಗಳನ್ನು (Assistive Technology) ಒದಗಿಸುವಲ್ಲಿ ಇಲಾಖೆ ಅಥವಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು.
- ಸರ್ಕಾರದ ವಿವಿದ ಇಲಾಖೆಗಳ ಅಂತರಜಾಲ ತಾಣಗಳು ಹಾಗೂ ತಂತ್ರಾಂಶಗಳು ಅಂಧ ನೌಕರರಿಗೆ Accessible ಇರುವಂತೆ ವಿನ್ಯಾಸಗೊಳಿಸುವುದರ ಬಗೆಗಿನ ಸಂಬಂದಪಟ್ಟ ಇಲಾಖೆಗಳ ಮನವರಿಕೆ ಮಾಡಿಕೊಳ್ಳುವುದು ಹಾಗೂ ಸಲಹೆಗಳನ್ನು ನೀಡುವುದು
- ಸದರಿ ಸಂಘಟನೆಯು ಸರ್ಕಾರಿ ಅಂಧ ನೌಕರರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಜೊತೆ ಜೊತೆಗೆ ಅನುದಾನಿತ ಅಂಗಸಂಸ್ಥೆಗಳು ಹಾಗೂ ಇನ್ನಿತರ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಧನೌಕರರ ಹಿತಾಸಕ್ತಿಯನ್ನು ಸಹ ಸಮುದಾಯದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಸಂರಕ್ಷಿಕೊಳ್ಳಲು ಯತ್ನಿಸುವುದು.
- ಅಂಧ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ, ಸೇವಾ ವೇತನ, ನಿವೃತ್ತಿ ವೇತನ ಭತ್ಯೆ, ಭವಿಷ್ಯ ನಿಧಿ, ಸೇರಿದಂತೆ ವಿಶೇಷ ಭತ್ಯೆ ಮುಂತಾದ ಸುಧಾರಣೆಯನ್ನು ಎತ್ತಿ ಹಿಡಿಯುವುದು ಮತ್ತು ಸುಧಾರಿಸುವುದಕ್ಕೆ ಸಲಹೆಗಳನ್ನು ನೀಡುವುದು.
- ಮೇಲ್ಕಾಣಿಸಿದಂತೆ ಸದಸ್ಯರ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಸಹಕಾರಿ ಸಂಘ, ಗೃಹ ನಿರ್ಮಾಣ ಸಂಘ, ಕಲ್ಯಾಣ ಯೋಜನೆಗಳು, ವಿದ್ಯಾರ್ಥಿ ವೇತನ ನಿಧಿ, ವಿವಾಹ ವೇದಿಕೆ, ಶೈಕ್ಷಣಿಕ ಸಂಸ್ಥೆಗಳು, ಮರಣ ಪರಿಹಾರ ನಿಧಿ, ಕ್ರೀಡಾ ಹಾಗೂ ಮನರಂಜನಾ, ಕ್ಲಬ್, ಸಾಂಸ್ಕೃತಿಕ ಚಟುವಟಿಕೆ, ವಿಧವಾ ನಿಧಿ ಮುಂತಾದವುಗಳನ್ನು ಹಮ್ಮಿಕೊಳ್ಳುವುದು.
- ತನ್ನ ಸದಸ್ಯರಲ್ಲಿ ಪ್ರಜಾಪ್ರಭುತ್ವ ಜಾತ್ಯತೀತ ಹಾಗೂ ರಾಷ್ಟ್ರೀಯ ಅರಿವಿನ ಸ್ಪೂರ್ತಿಯನ್ನು ಹಾಗು ಸ್ವಸಹಾಯ ಸ್ವಾವಲಂಬನೆ ಹಾಗೂ ಸ್ವಾಭಿಮಾನವನ್ನು ತೀವ್ರಗೊಳಿಸುವುದು.
- ಸಂಘದ ಹಿತಾಸಕ್ತಿಗಳಿಗೆ ಬಾಧಕವಲ್ಲದಂಥ ಷರತ್ತುಗಳಿಗೆ ಒಳಪಟ್ಟು ಸರಿಸಮಾನವಾದಂತಹ ಗುರಿಗಳು ಮತ್ತು ಧ್ಯೇಯೋದ್ದೇಶಗಳನ್ನು ಹೊಂದಿರುವ ಸರ್ಕಾರಿ ನೌಕರರ ಯಾವುದೇ ಇತರ ಸಂಘ ಅಥವಾ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಸಂಯೋಜನೆ ಏರ್ಪಡಿಸಿಕೊಳ್ಳುವುದು.
- ಸಂಘದ ಧ್ಯೇಯೋದ್ದೇಶಗಳನ್ನು ಈಡೇರಿಸುವುದಕ್ಕಾಗಿ ಎಲ್ಲಾ ರೀತಿಯ ವಂತಿಕೆಗಳನ್ನು, ದಾನಗಳನ್ನು ಕೊಡುಗೆಗಳನ್ನು ಸಂಗ್ರಹಿಸುವುದು. ಮತ್ತು ಸ್ವೀಕರಿಸುವುದು ಹಾಗೂ ಇತರ ವಿಧಾನಗಳಿಂದ ನಿಧಿಗಳನ್ನು ಸಂಗ್ರಹಿಸುವುದು.
- ಸದಸ್ಯರಲ್ಲಿ ದಕ್ಷತೆ, ಪ್ರಾಮಾಣಿಕತೆ, ನಿಸ್ಪೃಹತೆ, ಸಮಗ್ರತೆ ಹಾಗೂ ಇತರ ಉತ್ತಮ ಆಡಳಿತ/ ಸೇವಾ ಮೌಲ್ಯಗಳನ್ನು ಮೈಗೂಡಿಸಲು ಯತ್ನಿಸುವುದು.
- ಸಂಘದ ಸಮರ್ಪಕ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಅಗತ್ಯವಿರುವ ಚರ ಮತ್ತು ಸ್ಥಿರ ಸ್ವತ್ತುಗಳೆರಡನ್ನು ಅರ್ಜಿಸುವುದು ಮತ್ತು ಧಾರಣ ಮಾಡುವುದು.
- ತನ್ನ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಸಂಘದ ಧ್ಯೇಯೋದ್ದೇಶಗಳನ್ನು ಮುಂದುವರಿಸುವುದಕ್ಕೆ ಅವಶ್ಯವಾದಂತಹ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪೂರಕವಾದ ಇತರ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.
- ಮೇಲಿನ ಧ್ಯೇಯೋದ್ದೇಶಗಳನ್ನು ಮುಂದುವರೆಸಿಕೊಂಡು ಹೊಗುವಲ್ಲಿ ಪ್ರಾಸಂಗಿಕವಾದ ಮತ್ತು ಪ್ರಕಾರವಾದಂತಹ ಸಂಘ ರಚನೆಗೆ ಸಂಬಂಧಿಸಿದ ಇತರ ಕಾರ್ಯಗಳನ್ನು ಮಾಡುವುದು.
- ಬೆಂಚ್ ಮಾರ್ಕ್ Disability ಹೊಂದಿರುವ ಅಂಧ ನೌಕರರಿಗೆ ಕಾನೂನು ಬದ್ದವಾಗಿ ಲಭ್ಯವಿರುವ ಮೀಸಲಾತಿಯನ್ನು ಒಳಗೊಂಡಂತೆ ಇತರ ಸೌಲಭ್ಯಗಳು ದುರುಪಯೋಗ ಆಗದಂತೆ ಯತ್ನಿಸುವುದು.