ಸರ್ವ ಸದಸ್ಯರ ಸಭಾ ನಿರ್ಣಯಗಳು

ಎರಡನೇ ಮಹಾಸಭೆಯ ನಡಾವಳಿ

  ದಿನಾಂಕ: 12/05/2019 ಸಮಯ: 11AM-2PM
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಎರಡನೇ ಮಹಾಸಭೆಯನ್ನು ಕಲ್ಬುರ್ಗಿ ನಗರದಲ್ಲಿರುವ ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ಆವರಣದಲ್ಲಿ ದಿನಾಂಕ 12/05/2019 ರಂದು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಾಮಾನ್ಯ ಸದಸ್ಯರು, ಸಂಸ್ಥಾಪಕರು ಹಾಗು ಕಾರ್ಯಕಾರಿಯ ಪದಾಧಿಕಾರಿಗಳು ಭಾಗವಹಿಸುವುದರೊಂದಿಗೆ, ಕೆಳಗಿನ ನಡಾವಳಿಗಳಿಗೆ ಸಾಕ್ಷಿಯಾಗಿದ್ದರು.
1. ಸದಸ್ಯರ ಹಾಜರಾತಿಯನ್ನು ಪಡೆದುಕೊಂಡು ಬೆಳಗ್ಗೆ 11 ಘಂಟೆಗೆ ಮೈಸೂರು ವಿಭಾಗದ ನಿರ್ದೇಶಕರಾದ ಶ್ರೀಯುತ ಶಿವಕುಮಾರ್.‌ ಆರ್‌.ಸಿ ರವರ ನಿರೂಪಣೆಯೊಂದಿಗೆ, ಬೆಳಗಾವಿ ವಿಭಾಗೀಯ ನಿರ್ದೇಶಕರಾದ ಶ್ರೀಯುತ ವೆಂಕಣ್ಣ ಕಂಬಾರ್ ರವರ ಪ್ರಾರ್ಥನೆಯೊಂದಿಗೆ ಮತ್ತು ಉಪಾಧ್ಯಕ್ಷರಲ್ಲೊಬ್ಬರಾದ ಶ್ರೀಮತಿ ನಾಗಮಣಿ ಹೆಚ್.ಬಿ ರವರ ಸ್ವಾಗತ ಭಾಷಣದ ಮೂಲಕ ಮಹಾ ಸಭೆಯು ಆರಂಭವಾಯಿತು.
2. 2018/2019 ಸಾಲಿನ ವಾರ್ಷಿಕ ಆಡಳಿತ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಕೇಶವಮೂರ್ತಿ ಎಮ್ ರವರು ಮಂಡಿಸಿ ಸಂಘವು ಕೈಗೊಳ್ಳುವ ೨೦೧೯-೨೦೨೦ನೇ ವರ್ಷದ ಚಟುವಟಿಕೆಗಳ ಕುರಿತು ಸದಸ್ಯರ ಗಮನ ಸೆಳೆದರು.
3. 2018/2019 ಸಾಲಿನ ಆರ್ಥಿಕ ವರದಿಯನ್ನು ಖಜಾಂಚಿಗಳ ಪರವಾಗಿ, ಅಧ್ಯಕ್ಷರ ಅನುಮತಿಯೊಡನೆ ಸಂಘದ ತಾತ್ಕಾಲಿಕ ನೌಕರರಾದ ಆನಂದ್ ಎಚ್.ಎನ್ ರವರು ಮಂಡಿಸಿದರು. ಜೊತೆಗೆ 2019/2020 ಸಾಲಿನ ವೆಚ್ಚಗಳಿಗೆ ಆರ್ಥಿಕ ಅನುಮೋದನೆಯನ್ನು ಮಹಾಸಭೆಯಿಂದ ಪಡೆದುಕೊಳ್ಳಲಾಯಿತು.

4. ಅಧ್ಯಕ್ಷರು ಮಹಾಸಭೆಯಲ್ಲಿ ಈ ಕೆಲವು ಗೊತ್ತುವಳಿಗಳನ್ನು ಮಂಡಿಸಿದರು ಮತ್ತು ಎಲ್ಲಾ ಸದಸ್ಯರಿಂದ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಒಮ್ಮತದಲ್ಲಿ ಕೈಗೊಂಡ ನಿರ್ಣಯಗಳೆಂದರೆ,
(1.) 13/05/2019ರಿಂದ ೧೩/೦೬/೨೦೧೯ರ ಒಳಗೆ ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘಕ್ಕೆ ಸದಸ್ಯರಾಗುವುದು ಮತ್ತು ಕನಿಷ್ಠ ಎರಡು ಷೇರುಗಳನ್ನು ಸದರಿ ಸಂಘದ ಎಲ್ಲಾ ಸದಸ್ಯರು ಪಡೆದುಕೊಳ್ಳಲು ನಿರ್ಣಯಿಸಲಾಯಿತು.
(2.) ಸಂಘದ ಸಂವಿಧಾನದಲ್ಲಿ ಕಂಡುಬಂದಿರುವ ತಪ್ಪು ಕಾಗುಣಿತವನ್ನು ಸರಿಪಡಿಸಿಕೊಳ್ಳಲು ಮತ್ತು ಆಂಗ್ಲ ಭಾಷೆಗೂ ಇದನ್ನು ಅನುವಾದಿಸಲು ನಿರ್ಣಯಿಸಲಾಯಿತು.
(3.) ಸಂಘದ ಸಂವಿಧಾನದ ಮುನ್ನುಡಿಯಲ್ಲಿ “ಜವಾಬ್ದಾರಿಯುತ ರಾಜ್ಯ ಸರ್ಕಾರಿ ನೌಕರರು (RSGE)” ವಾಟ್ಸಪ್ ಗುಂಪಿನ ಕುರಿತು ಖಂಡಿಕೆಯನ್ನು ಸೇರ್ಪಡೆಗೊಳಿಸಲು ನಿರ್ಣಯಿಸಲಾಯಿತು.
(4.) ಸಂಘದ ಸಂವಿಧಾನದ ಪರಿಭಾಷೆಯಲ್ಲಿನ (e) “ಸಂಘದ ವರ್ಷ” ಎಂದರೆ “ಕ್ಯಾಲೆಂಡರ್ ವರ್ಷ” ಎಂಬುವುದಕ್ಕೆ ಬದಲಾಗಿ “ಆರ್ಥಿಕ ವರ್ಷ” ಎಂಬಂತೆ ತಿದ್ದುಪಡಿಗೊಳಿಸಿಕೊಳ್ಳಲು ಮತ್ತು ಸಂಘದ ಚಟುವಟಿಕೆಗಳನ್ನು ಆರ್ಥಿಕ ವರ್ಷಕ್ಕೆ ಪರಿವರ್ತಿಸಿಕೊಳ್ಳಲು ನಿರ್ಣಯಿಸಲಾಯಿತು.
(5.) ಸಂಘದ ಸಂವಿಧಾನದ ಎಂಟನೇ ವಿಧಿಯಲ್ಲಿರುವ “ಸದಸ್ಯತ್ವವು ರದ್ದುಗೊಳ್ಳುವಿಕೆ” ಇದರಡಿಯಲ್ಲಿರುವ “c” ನಿಯಮಕ್ಕೆ ಮಾರ್ಪಾಟುಗೊಳಿಸುವುದರ ಮೂಲಕ ಅಂಧತ್ವದೊಂದಿಗೆ ಚಲನ ಅಂಗವಿಕಲತೆಯನ್ನು ಹೊಂದಿದ ನೌಕರರಿಗೆ ಹಾಗೂ ಧೀರ್ಘಕಾಲೀನ ಖಾಯಿಲೆಯುಳ್ಳ ನೌಕರರಿಗೆ ವಿನಾಯಿತಿಯನ್ನು ಕಲ್ಪಿಸುವುದಕ್ಕಾಗಿ ಷರತ್ತುಬದ್ಧ ನಿಯಮವನ್ನು ಸೇರಿಸಲು ನಿರ್ಣಯಿಸಲಾಯಿತು.
(6.) ಸಂಘದ ಸಂವಿಧಾನದ 12 (B) ವಿಧಿಯಲ್ಲಿರುವ “ಮಹಾ ಸಭೆಯಲ್ಲಿ ಕೋರಂ” ಈ ಕುರಿತು ಪ್ರಸ್ತುತ ಸಭೆಯು ತನ್ನ ಕಾರ್ಯಕಲಾಪಗಳನ್ನು ನಡೆಸಲು “ಒಟ್ಟು ಅರ್ಹ ಸದಸ್ಯರ ಪೈಕಿ ಶೇ 50ರಷ್ಟು ಸದಸ್ಯರು ಹಾಜರಿರತಕ್ಕದ್ದು” ಎಂಬಂತೆ ಇರುವ ನಿಯಮಕ್ಕೆ ಬದಲಾಗಿ “ಒಟ್ಟು ಅರ್ಹ ಸದಸ್ಯರ ಪೈಕಿ ಶೇ ಮೂರನೇ ಒಂದರಷ್ಟು ಅಥವಾ ಕನಿಷ್ಠ 100 ರಷ್ಟು ಸದಸ್ಯರು ಹಾಜರಿರತಕ್ಕದ್ದು” ಎಂಬಂತೆ ತಿದ್ದುಪಡಿಗೊಳಿಸಲು ನಿರ್ಣಯಿಸಲಾಯಿತು.
(7.) ಕಟ್ಟಡಗಳನ್ನು, ರಸ್ತೆಗಳನ್ನು ಹಾಗೂ ತಂತ್ರಾಂಶಗಳನ್ನು ಅಂಧ ಸ್ನೇಹಿಗೊಳಿಸುವುದಕ್ಕಾಗಿ ಖಾಸಗಿ ಹಾಗೂ ಸಾರ್ವಜನಿಕ ವಲಯಗಳೆರಡರಲ್ಲೂ ರಾಜ್ಯವ್ಯಾಪಿ “ಸುಗಮ್ಯ ಕರ್ನಾಟಕ” ಎಂಬ ಆಂದೋಲನವನ್ನು ಕೈಗೊಳ್ಳಲು ನಿರ್ಣಯಿಸಲಾಯಿತು.
(8.) ಮೂರನೇ ಮಹಾ ಸಭೆಯನ್ನು 2020ನೇ ವರ್ಷಕ್ಕೆ ಮೈಸೂರಿನಲ್ಲಿ ಆಯೋಜಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.
5. ನೀತಿ ನಿರೂಪಣೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಗದೀಶ್ ಆರ್ ಮತ್ತು ಸಂಸ್ಥಾಪಕ ಸದಸ್ಯರಾದ ವೀರಕ್ಯಾತಯ್ಯ ರವರುಗಳ ನೇತೃತ್ವದಲ್ಲಿ ಕಲ್ಬುರ್ಗಿ ವಿಭಾಗದ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ಕೈಗೊಳ್ಳಲಾಯಿತು ಮತ್ತು ಸಭಾಸೂಚನಾ ಪತ್ರದಲ್ಲಿ ಉಲ್ಲೇಖಿಸಿದಂತೆ ನಿಗದಿತ ಅವಧಿಯಲ್ಲಿ ಕೇವಲ ಸದಸ್ಯರಾದ ಚನ್ನವೀರ ರವರು ಮಾತ್ರ ಪ್ರಶ್ನೆಗಳನ್ನು ಕಳುಹಿಸಿದ್ದರು ಮತ್ತು ಅವುಗಳಿಗೆ ಈ ಇಬ್ಬರು ಸಮರ್ಪಕವಾಗಿ ಉತ್ತರಗಳನ್ನು ನೀಡಿದರು. ಚನ್ನವೀರ ರವರು ಕಳುಹಿಸಿದ ಪ್ರಶ್ನೆಗಳು ಮತ್ತು ಜಗದೀಶ್ ಆರ್ ಮತ್ತು ವೀರಕ್ಯಾತಯ್ಯ ರವರುಗಳು ನೀಡಿದ ಉತ್ತರಗಳು ಇಂತಿವೆ.
ಪ್ರಶ್ನೆ-1. ಹೈದ್ರಬಾದ್ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಒಬ್ಬ ಅಂಧ ಅಭ್ಯರ್ಥಿಯನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಬಹುದೇ?
ಉತ್ತರ: ಸದ್ಯ ಸದರಿ ಮಂಡಲಿಯಲ್ಲಿ ಜನ ಪ್ರತಿನಿದಿಗಳು ಮತ್ತು ಆಡಳಿತ, ಹಣಕಾಸು ಯೋಜನೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಇದರ ಸದಸ್ಯರಾಗಿದ್ದು, ಸದಸ್ಯರ ಆಯ್ಕೆ ಮತ್ತು ನೇಮಕಾತಿ ವಿಧಾನಗಳ ಕುರಿತು ಜಾರಿ ಇರುವ ನಿಯಮಗಳ ಕುರಿತು ಮಾಹಿತಿ ಸಂಗ್ರಹಿಸಿ, ಅಂಗವಿಕಲರ ಪ್ರಾತ್ಯನಿದ್ಯಕ್ಕೆ ಅವಕಾಶ ಕಲ್ಪಿಸಬಹುದಾದ ವಿಧಾನಗಳು ಮತ್ತು ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.
ಪ್ರಶ್ನೆ-2. ಹೈದ್ರಬಾದ್ ಕರ್ನಾಟಕದ ಅಂಧ ನೌಕರರಿಗಾಗಿ ಹೈದ್ರಬಾದ್ ಕರ್ನಾಟಕದ ಹಣಕಾಸಿನ ಮೂಲಕ ವಿಶೇಷ ತರಬೇತಿ ಆಯೋಜಿಸಬಹುದೇ?
ಉತ್ತರ: ಹೈದ್ರಾಬಾದ್‌ ಕರ್ನಾಟಕ ಬಾಗದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಅವಕಾಶ ನೀಡಿದ್ದು, ಇದಕ್ಕಾಗಿ ಅನುದಾನಗಳನ್ನು ಮತ್ತು ಅಗತ್ಯ ಸಂಪನ್ಮೂಲಗಳನ್ನು ಕ್ರೋಢಿಕರಿಸುವ ಮತ್ತು ಪಡೆದುಕೊಳ್ಳಲು ಅವಕಾಶವಿದ್ದು, ಆರ್.ಪಿ.ಡಿ. ಕಾಯಿದೆಯ ಅನ್ವಯ ಯಾವುದೇ ಅನುದಾನ ಅಥವಾ ಸರ್ಕಾರಿ ಯೋಜನೆಗಳಲ್ಲಿ ಮೀಸಲಿಡಬೇಕಾದ ಐದು ಪ್ರತಿಶತ ಅಂಗವಿಕಲ ವ್ಯಕ್ತಿಗಳ ಅನುದಾನ/ ಯೋಜನೆಗಳನ್ನು ಬಳಸಿಕೊಂಡು ವಿಶೇಷ ತರಬೇತಿಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಅಂಗವಿಕಲ ವ್ಯಕ್ತಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯ, ಸಹಾಯಕ ಉಪಕರಣ ಸೇರಿದಂತೆ ಹಲವಾರು ಅಗತ್ಯ ಅನುಕೂಲತೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಶ್ನೆ-3. ಸ್ಥಳೀಯ ಹಿರಿಯ ನಾಗರಿಕ ಹಾಗೂ ಅಂಗವಿಕಲ ಇಲಾಖೆ ಅಧಿಕಾರಿಗಳಿಗೆ ಅಂಗವಿಕಲತೆಯ ಬಗ್ಗೆ ತರಬೇತಿ ಅವಶ್ಯಕತೆ ಇದ್ದು, ಇದನ್ನು ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಬಹುದೇ?
ಉತ್ತರ: ಸಮುಚಿತ ಮಾರ್ಗದ ಮೂಲಕ ಈ ಕುರಿತು ಸಂಘಟನೆಯು ಮಾಹಿತಿ ಕಲೆ ಹಾಕಲು ಯತ್ನಿಸುವುದು.
6. ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘದ ಕುರಿತು ಮುಖ್ಯ ಪ್ರವರ್ತಕರಾದ ಶ್ರೀ ವೀರಕ್ಯಾತಯ್ಯ ಮತ್ತು ಸಹ ಪ್ರವರ್ತಕರಾದ ಶ್ರೀ ಯಶವಂತ್ ಕುಮಾರ್ ಹೆಚ್.ವಿ ರವರು ಸದಸ್ಯರಿಗೆ ಮಾಹಿತಿ ನೀಡಿದರು ಮತ್ತು ಎಲ್ಲಾ ಸದಸ್ಯರು ಸಹಕಾರ ಸಂಘಕ್ಕೆ ಸದಸ್ಯತ್ವ ಪಡೆಯುವುದಾಗಿ ಭರವಸೆ ನೀಡಿದರು.
7. ಮತ್ತೊಬ್ಬ ಉಪಾಧ್ಯಕ್ಷರಾದ ಶ್ರೀ ಕುಪೇಂದ್ರ ರವರ ವಂದನಾರ್ಪಣೆಯೊಂದಿಗೆ ಅಧಿಕೃತವಾಗಿ ಸಭೆಯು ಮುಕ್ತಾಯವಾಯಿತು.
***************************

ಸರ್ವ ಸದಸ್ಯರ ಒಂದನೇ ಮಹಾಸಭೆಯ ನಡಾವಳಿಗಳು:

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಮೊದಲ ಸರ್ವ ಸದಸ್ಯರ ಮಹಾ ಸಭೆಯು ದಿನಾಂಕ ೧೫/೦೪/೨೦೧೮ ರಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯಲ್ಲಿ ಜರುಗಿತು. ಈ ಮಹಾ ಸಭೆಯ ಜೊತೆಗೆ ಸಂಘಟನೆಗೆ ಮೊದಲ ಚುನಾಯಿತ ಕಾರ್ಯಕಾರಿ ಮಂಡಳಿಯ ಕೆಲವು ಹುದ್ದೆಗಳಿಗೆ ಮತದಾನವೂ ಜರುಗಿತು. ಚುನಾವಣೆಯ ಭಾಗವಾದ ಮತದಾನದ ಬಳಿಕ ಅಪರಾಹ್ನ ಮೂರು ಘಂಟೆಗೆ ಸಾಮಾನ್ಯ ಸಭೆ ಜಯಣ್ಣನವರ ಪ್ರಾರ್ಥನೆಯೊಡನೆ ಆರಂಭವಾಗಿ ಕೆಳಗಿನ ನಡಾವಳಿಗೆ ಸಾಕ್ಷಿಯಾಯಿತು.

  • ತಾತ್ಕಾಲಿಕ ಕಾರ್ಯಕಾರಿಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧರಾಜುರವರು ಸಂಘಟನೆಯ ವಾರ್ಷಿಕ ವರದಿಯನ್ನು ವಾಚಿಸಿ ಕಳೆದ ಸಾಲಿನಲ್ಲಿ ಸಮುದಾಯದ ಹಿತಾಸಕ್ತಿಗಾಗಿ ಕಾರ್ಯಕಾರಿ ಕೈಗೊಂಡ ಕ್ರಮಗಳನ್ನು ಸರ್ವ ಸದಸ್ಯರ ಗಮನಕ್ಕೆ ತಂದರು.
  • ತಾತ್ಕಾಲಿಕ ಕಾರ್ಯಕಾರಿಯ ಖಜಾಂಚಿ ಯಶವಂತ್ ಕುಮಾರರು ಸಂಘಟನೆಯ ವಾರ್ಷಿಕ ಆಯವ್ಯಯ ವಿವರಗಳನ್ನು ಮಂಡಿಸಿ ಸದಸ್ಯರ ಅನುಮೋದನೆ ಪಡೆದುಕೊಂಡರು.
  • ಸಂಘಟನೆಯ ಚುನಾಯಿತ ಕಾರ್ಯಕಾರಿಯು ಮುಂಬರುವ ದಿನಗಳಲ್ಲಿ ಸಮುದಾಯದ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡರು.
  • ಅಧ್ಯಕ್ಷರ ಸಮ್ಮತಿಯೊಡನೆ ಸರ್ಕಾರದ ಗಮನಕ್ಕೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ತರಲು ಚರ್ಚೆ ಜರುಗಿ ಸಮಿತಿಗಳ ನೆರವಿನಿಂದ ಸದಸ್ಯರ ಸಲಹೆಗಳನ್ನು ಅನುಷ್ಟಾನಗೊಳಿಸಲು ನಿರ್ಧರಿಸಲಾಯಿತು.
  • ಚುನಾವಣೆ ನಡೆದ ಸ್ಥಾನಗಳ ಫಲಿತಾಂಶವನ್ನು ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಘೋಷಿಸಲಾಯಿತು.